02 December 2017

ಸರ್ಕಾರದ ಅರ್ಥಶಾಸ್ತ್ರ

ಸರ್ಕಾರದ ಅರ್ಥಶಾಸ್ತ್ರ:

• ಸರ್ಕಾರದ ಬಳಿ ಸ್ವಂತ ಹಣ ಏನೂ ಇಲ್ಲ. ಸರ್ಕಾರದ ಹಣ ಎಂದರೆ ಜನರ (ತೆರಿಗೆದಾರರ) ಹಣ. ಸರ್ಕಾರ ಹಣ ಖರ್ಚು ಮಾಡಿದಾಗ, ಆ ಹಣ ರಾಜಕೀಯ ನಾಯಕರಿಂದ ಬರುವುದಿಲ್ಲ - ಅದು ಜನರಿಂದ ಬರುತ್ತದೆ.
• ಸರ್ಕಾರದ/ಜನರ ಹಣ ಸೀಮಿತ, ಅಸೀಮಿತವಲ್ಲ. ಅದನ್ನು ಯಾವುದಕ್ಕಾದರೂ ಖರ್ಚು ಮಾಡಿದರೆ, ಆಗ ಬೇರೆಯದಕ್ಕೆ ಖರ್ಚು ಮಾಡಲು ಹಣ ಕಡಿಮೆ ಆಗುತ್ತದೆ.
• ವಾಮವಾದಿಗಳು ದಕ್ಷತೆಯು 'ಶ್ರೀಮಂತ-ಪರ' ಮತ್ತು 'ಬಡವರ-ವಿರೋಧಿ' ಎಂದು ಸುಳ್ಳು ಹೇಳಿ ಅಪಪ್ರಚಾರ ಮಾಡಿದ್ದಾರೆ. ಆದರೆ ಸತ್ಯ ಎಂದರೆ: ದಕ್ಷತೆಯೇ ಪರಮ ಬಡವರ-ಪರ ಗುಣ ಮತ್ತು ಅದಕ್ಷತೆಯೇ ಪರಮ ಬಡವರ-ವಿರೋಧಿ ಗುಣ. ಯಾಕೆ? ಯಾಕೆಂದರೆ ಬಡವರೇ ಸರ್ಕಾರವನ್ನು ಹೆಚ್ಚು ಅವಲಂಬಿಸುವರು. ಆದ್ದರಿಂದ ಸರ್ಕಾರ ಅದಕ್ಷವಾದಾಗ, ಅದರಿಂದ ಹೆಚ್ಚು ನಷ್ಟವಾಗುವುದು ಬಡವರಿಗೇ. ಆದುದರಿಂದ ನಾವು ದಕ್ಷತೆಯ ಮಹತ್ವ ಅರ್ಥ ಮಾಡಿಕೊಳ್ಳಬೇಕು.
• "ಬಡವನಿಗೆ ಅಕ್ಕಿ ಕೊಟ್ಟರೆ, ಅವನ ಹೊಟ್ಟೆ ಒಂದು ದಿನ ತುಂಬುತ್ತದೆ. ಆದರೆ ಅವನಿಗೆ ಬತ್ತ ಬೆಳೆಯುವುದು ಕಲಿಸಿದರೆ, ಅವನ ಹೊಟ್ಟೆ ಇಡೀ ಜೀವನ ತುಂಬುತ್ತದೆ" ಎಂದು ಆಫ್ರಿಕಾದ ಗಾದೆ ಇದೆ. ಸುಮ್ಮನೆ ಬಡವರಿಗೆ ಹಣ ಕೊಟ್ಟರೆ, ಅವರ ಬಡತನ ಹೋಗುವುದಿಲ್ಲ. ಅದು ಅವರನ್ನು ಬಡತನದಲ್ಲಿಯೇ ಇಡುತ್ತದೆ. ಅವರನ್ನು ಬಡತನದಿಂದ ಆಚೆ ತರಬೇಕೆಂದರೆ, ನಾವು ಅವರಿಗೆ ಕೆಲಸ ಮಾಡುವ ಮತ್ತು ದುಡಿಯುವ ಸಾಮರ್ಥ್ಯ ಕೊಡಬೇಕು. ಅಂದರೆ, ನಾವು ಅವರಿಗೆ ಶಿಕ್ಷಣ, ಆರೋಗ್ಯ ಮತ್ತು ಮೂಲವ್ಯವಸ್ಥೆ (ರಸ್ತೆ, ನೀರು, ವಿದ್ಯುತ್ತು) ಕೊಡಬೇಕು. ಆದ್ದರಿಂದ, ಸರ್ಕಾರದ ಹಣ ಹೂಡಿಕೆಗೆ ಹೋಗಬೇಕು - ಖರ್ಚಿಗಲ್ಲ.
• ಸಾಲ ಒಳ್ಳೆಯದಲ್ಲ. ಏಕೆಂದರೆ, ನಾವು ಸಾಲ ಮಾಡಿದಾಗ ಆ ಸಾಲದ ಮೊತ್ತವನ್ನು ತೀರಿಸುವುದಷ್ಟೇ ಅಲ್ಲ - ಅದರ ಮೇಲಿನ ಬಡ್ಡಿಯನ್ನೂ ಕೂಡ ಕಟ್ಟಬೇಕು. ಆದ್ದರಿಂದ ನಾವು ಸಾಲ ಮಾಡಬಾರದು. ಅಂದರೆ, ನಮ್ಮ ಖರ್ಚು ನಮ್ಮ ಆದಾಯಕ್ಕಿಂತ ಕಡಿಮೆ ಇರಬೇಕು. ಇದು ಅರ್ಥನಿರ್ವಹಣೆಯ ಮೂಲಭೂತ ನಿಯಮ. ಪ್ರತಿಯೊಂದು ಕುಟುಂಬಕ್ಕೂ ಇದು ಗೊತ್ತು. ಆದರೆ ವಿಚಿತ್ರ ಎಂದರೆ, ನಾವು ಈ ನಿಯಮವನ್ನು ಯಾವತ್ತೂ ನಮ್ಮ ಸರ್ಕಾರಕ್ಕೆ ಅನ್ವಯಿಸುವುದಿಲ್ಲ.
• ‎ಒಂದು ವ್ಯವಸ್ಥೆ ಎಷ್ಟು ಸರಳವೋ, ಅದು ಅಷ್ಟೇ ದಕ್ಷವಾಗಿರುತ್ತದೆ. ಈ ನಿಯಮ ತೆರಿಗೆ ವ್ಯವಸ್ಥೆಗೆ ಅತ್ಯಂತ ಪ್ರಸ್ತುತ. ತೆರಿಗೆ ವಿನಾಯಿತಿಗಳು ತೆರಿಗೆ ವ್ಯವಸ್ಥೆಯನ್ನು ಬಹಳ ಸಂಕೀರ್ಣ ಮತ್ತು ಅದಕ್ಷ ಮಾಡುತ್ತವೆ. ಆದ್ದರಿಂದ ಎಲ್ಲ ತೆರಿಗೆ ವಿನಾಯಿತಿಗಳನ್ನು ತೆಗೆದುಹಾಕಬೇಕು. ಬೇಕಾದರೆ ತೆರಿಗೆ ದರಗಳನ್ನು ಇಳಿಸಬಹುದು.
• ಸರ್ಕಾರದ ಕೆಲಸ ನಿಯಮಗಳನ್ನು ರಚಿಸುವುದು ಮತ್ತು ಅವುಗಳನ್ನು ಜಾರಿಗೆ ತರುವುದು. ಸರ್ಕಾರದ ಕೆಲಸ ವಸ್ತುಗಳನ್ನು ಉತ್ಪಾದಿಸುವುದು ಅಲ್ಲ. ಖಾಸಗಿ ಕ್ಷೇತ್ರ ಈ ಕೆಲಸವನ್ನು ಹೆಚ್ಚು ದಕ್ಷವಾಗಿ ಮಾಡುತ್ತದೆ. ಆದ್ದರಿಂದ ಎಲ್ಲ ಸರ್ಕಾರಿ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಬೇಕು.
• ಮುಕ್ತ-ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ ಪ್ರತಿ ವಸ್ತು ಮತ್ತು ಸೇವೆಯ ಬೆಲೆಯನ್ನು ಅದರ ಬೇಡಿಕೆ ಮತ್ತು ಪೂರೈಕೆ ನಿರ್ಧರಿಸುತ್ತವೆ. ಪ್ರತಿ ವಸ್ತು ಮತ್ತು ಸೇವೆಯ ಬೆಲೆ ಈ ರೀತಿ ನಿರ್ಧಾರವಾದರೆ, ಸಮಾಜದ ಸಂಪನ್ಮೂಲಗಳು ಅತ್ಯಂತ ದಕ್ಷವಾದ ರೀತಿಯಲ್ಲಿ ನಿಯೋಜನೆ ಆಗುತ್ತವೆ. ಈ ನಿಯಮವನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸಿದರೆ, ಅದರಿಂದ ಅದಕ್ಷತೆ ಉಂಟಾಗುತ್ತದೆ. ಎರಡು ಪ್ರಮುಖ ಉಲ್ಲಂಘನೆಗಳೆಂದರೆ:
1) ಸರ್ಕಾರ ಯಾವುದೇ ವಸ್ತು ಅಥವಾ ಸೇವೆಯ ಬೆಲೆಯನ್ನು ನಿಯಂತ್ರಿಸುವುದು
2) ‎ಸರ್ಕಾರ ಯಾವುದೇ ವಸ್ತು ಅಥವಾ ಸೇವೆಯ ಬೆಲೆಯ ಸ್ವಲ್ಪ ಭಾಗವನ್ನು ಕೊಡುವುದು (ಇದಕ್ಕೆ 'ಸಬ್ಸಿಡಿ' ಎಂದು ಕರೆಯುತ್ತಾರೆ)
ಸಬ್ಸಿಡಿಗಳು ವಸ್ತುಗಳ ಮತ್ತು ಸೇವೆಗಳ ಬೆಲೆಗಳನ್ನು ಕಡಿಮೆ ಮಾಡುತ್ತವೆ. ಇದರಿಂದ ಸಮಾಜದ ಸಂಪನ್ಮೂಲಗಳು ಅದಕ್ಷವಾದ ರೀತಿಯಲ್ಲಿ ನಿಯೋಜನೆ ಆಗುತ್ತವೆ. ಆದ್ದರಿಂದ ಸಬ್ಸಿಡಿಗಳು ಒಳ್ಳೆಯದಲ್ಲ.

No comments: